About Mahasabha 2018-07-13T11:54:28+00:00

ಗುರಿ ಮತ್ತು ಉದ್ದೇಶಗಳು

ಇದು ವಾಣಿಜ್ಯೇತರ ಮತ್ತು ಲಾಭ ನಷ್ಟವನ್ನು ಪರಿಗಣಿಸದೆ ಸಮಾಜ ಸೇವೆ ಮಾಡುವ ಹಾಗೂ ಸಮಾಜದಲ್ಲಿ ಭಾವೈಕ್ಯತೆ, ಸೌಹಾರ್ದತೆಯನ್ನು ಮೂಡಿಸಿ ಎಲ್ಲ ಮಾನವೀಯ ಕ್ಷೇತ್ರಗಳಲ್ಲಿ ಸಮಾಜದ ಏಳಿಗೆ ಮತ್ತು ಕಲ್ಯಾಣವನ್ನು ಸಾಧಿಸಲು ರಚಿಸಲಾದ ಸಂಸ್ಥೆಯಾಗಿದೆ. ಮಹಾಸಭಾ ತನ್ನ ಶಾಖೆಗಳನ್ನು ರಾಜ್ಯ, ಜಿಲ್ಲೆ, ತಾಲ್ಲೂಕು, ನಗರ/ಪಟ್ಟಣ/ಗ್ರಾಮ ಮಟ್ಟಗಳಲ್ಲಿ ಸ್ಥಾಪಿಸಬಹುದು. ಎಲ್ಲ ಮಟ್ಟದ ಶಾಖೆಗಳಿಗೂ ಒಂದೇ ರೀತಿಯ, ಈ ಮುಂದೆ ವಿವರಿಸಿದ ಗುರಿ ಮತ್ತು ಉದ್ದೇಶಗಳು ಹಾಗೂ ನಿಯಮ ನಿರ್ಬಂಧಗಳು ಅನ್ವಯಿಸುತ್ತವೆ.

 1. ಸಮುದಾಯ ಸಂಘಟ: ರಾಷ್ಟ್ರ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ, ತಾಲ್ಲೂಕು ಮಟ್ಟದಲ್ಲಿ ಮತ್ತು ದೊಡ್ಡ ಗ್ರಾಮ/ಪಟ್ಟಣ/ನಗರಗಳಲ್ಲಿ ಮಹಾಸಭಾ ಘಟಕಗಳನ್ನು ಸಂಘಟಿಸುವುದು ಹಾಗೂ ಸಕ್ರಿಯವಾಗಿ ಅವು ಸಮುದಾಯದ ಸಾಮೂಹಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ನೋಡಿಕೊಳ್ಳುವುದು.
 2. ಸಮುದಯ ವಿಕಾಸ: ಲಿಂಗಾಯತ ಸಮುದಾಯ (ಅಂದರೆ ಅದರ ಎಲ್ಲ ಉಪಪಂಗಡಗಳ) ಸಮಗ್ರ ವಿಕಾಸಕ್ಕೆ ಸೂಕ್ತ ಕಾರ್ಯಕ್ರಮಗಳನ್ನು ರೂಪಿಸಿ ಸಮುದಾಯದ ಸಂಘ ಸಂಸ್ಥೆಗಳ, ಪಂಗಡಗಳ ಮತ್ತು ಸಮಸ್ಥ ಲಿಂಗಾಯತರ ಸಹಾಯದಿಂದ ಸಂಘಟಿತವಾಗಿ ಕಾರ್ಯರೂಪಕ್ಕೆ ತರುವುದು.
 3. ಸರ್ಕಾರದಿಂದ ದೊರೆಯುವ ಅಭಿವೃದ್ಧಿ ಸವಲತ್ತುಗಳು ಸಮಾಜದ ಬಾಂಧವರಿಗೆ ದೊರೆಯುವಂತೆ ಅರಿವು ಮೂಡಿಸಲು ಮತ್ತು ಸಹಾಯ ಮಾಡಲು ಸೂಕ್ತ ಕಾರ್ಯಕ್ರಮ ರೂಪಿಸುವುದು.
 4. ಸಮುದಾಯ ಸುಧಾರಣೆ: ಅಸ್ಪøಶ್ಯತೆ ನಿವಾರಣೆ, ಅಂತರಜಾತೀಯ ಸೌಹಾರ್ದತೆ ಮತ್ತು ಸಹನೆ ಬೆಳೆಸುವುದು, ವರದಕ್ಷಿಣೆ ಪದ್ಧತಿಯ ನಿರ್ಮೂಲನೆ, ಸರಳ ಮತ್ತು ಸಾದಾ ವಿವಾಹಗಳನ್ನು ವಿಧವಾ ವಿವಾಹಗಳನ್ನು ಪ್ರೋತ್ಸಾಹಿಸುವುದು. ಸಮಾಜದ ಹಿಂದುಳಿದ ಸಮುದಾಯಗಳ ಏಳ್ಗೆಗೆ ಶ್ರಮಿಸುವುದು, ಹೆಣ್ಣು ಮಕ್ಕಳ ಮತ್ತು ಚಿಕ್ಕ ಮಕ್ಕಳ ಸಮಗ್ರ ಮತ್ತು ಸಮರ್ಪಕ ವಿಕಾಸಕ್ಕೆ ಒತ್ತು ನೀಡುವುದು.
 5. ಸಮುದಾಯದ ಹಿತರಕ್ಷಣೆ: ಲಿಂಗಾಯತ ಸಮುದಾಯಕ್ಕೆ ಯಾವುದೇ ರೀತಿಯ ತೊಂದರೆ, ಅನ್ಯಾಯ, ಅತ್ಯಾಚಾರ, ನಿರ್ಲಕ್ಷ್ಯ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ತಾರತಮ್ಯ ಉಂಟಾಗುವ ಸಂದರ್ಭಗಳಲ್ಲಿ ಅವುಗಳನ್ನು ನಿವಾರಿಸಿಕೊಳ್ಳಲು ಸಮಗ್ರ ಸಮುದಾಯದ ಸಂಘಟಿತ ಹೋರಾಟವನ್ನು ಶಾಂತಿಯುತವಾಗಿ, ಅಹಿಂಸಾತ್ಮಕವಾಗಿ, ಕಾನೂನಿಗೆ ಭಂಗ ಬಾರದಂತೆ ನಡೆಸುವುದು.
 6. ತತ್ವ ಪ್ರಸಾರ:  ಬಸವೇಶ್ವರರು ಮತ್ತು ಅವರ ಸಮಕಾಲೀನ ಶರಣರು ಬೋಧಿಸಿದ ಲಿಂಗಾಯತ ಧರ್ಮ, ಶರಣ ತತ್ವಗಳು ಮತ್ತು ಆಚರಣೆಗಳನ್ನು ಜಾರಿಗೆ ತರುವುದು, ಶರಣ ಸಾಹಿತ್ಯದ ಪ್ರಚಾರ, ಪ್ರಸಾರ ಕಾರ್ಯಗಳನ್ನು ಹೆಚ್ಚಿಸುವುದು.
 7. ಕ್ಷೆತ್ರ ಕಾರ್ಯ:  ವಿಚಾರ ಸಂಕಿರಣ, ಸಮ್ಮೇಳನ, ಲಿಂಗದೀಕ್ಷೆ, ಸಹಜ ಇಷ್ಟ ಲಿಂಗ ಪೂಜಾ ಶಿಬಿರ, ಪ್ರವಚನ, ಪ್ರಶಿಕ್ಷಣ ಮತ್ತು ಸಾಮೂಹಿಕ ವಿವಾಹಗಳನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಆಗಾಗ ಸಂಘಟಿಸುವುದು.
 8. ವಿಶೇಷ ಗ್ರಂಥಾಲಯ:  ಪ್ರತ್ಯೇಕ ಮತ್ತು ವಿಶೇಷ ಗ್ರಂಥಾಲಯವನ್ನು ಸ್ಥಾಪಸಿವುದು, ತಾಳೋಲೆ, ಹಸ್ತಪ್ರತಿ, ಪುರಾತನ ಗ್ರಂಥಗಳ ಸಂಗ್ರಹ, ಪುರಾತನ ನಾಣ್ಯಗಳು, ಪುರಾತನ ಚಿತ್ರಪಟಗಳು, ತಾಮ್ರಶಾಸನಗಳು, ಇತ್ಯಾದಿಗಳನ್ನು ಸಂಗ್ರಹಿಸುವುದು. ಎಲ್ಲ ಶರಣ ಸ್ಥಳಗಳನ್ನು ಸ್ಮಾರಕಗಳನ್ನು ರಕ್ಷಿಸುವುದು ಮತ್ತು ಅಭಿವೃದ್ಧಿಪಡಿಸುವುದು. ಅದಕ್ಕಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಾಚ್ಯ ಶಾಸ್ತ್ರಜ್ಞರ ಸಲಹೆ ಪಡೆದು ಲಭ್ಯವಿರುವ ಸರ್ಕಾರದ ಸಹಾಯ ಪಡೆಯುವುದು.
 9. ಸಂಶೋಧನೆ:  ವಚನ ಸಾಹಿತ್ಯದ, ಶರಣರ ಚರಿತ್ರೆಗಳ ಹಾಗೂ ಶರಣರ ಸ್ಥಳಗಳ ಸಂಶೋಧನೆಗೆ ಒತ್ತು ನೀಡುವುದು, ಡಾಕ್ಟರೇಟ್ ಅಧ್ಯಯನಗಳನ್ನು ಪ್ರೋತ್ಸಾಹಿಸುವುದು ಮತ್ತು ಉನ್ನತ ಮಟ್ಟದ ಸಂಶೋಧನ ಗ್ರಂಥಗಳನ್ನು ಪ್ರಕಟಿಸುವುದು.
 10. ಪ್ರಕಾಶನ ಮತ್ತು ಪ್ರಸರಣ ವಿಭಾಗ:  ಶ್ರೇಷ್ಠ ಗುಣಮ್ಟಟದ “ಲಿಂಗಾಯತ ಧ್ವನಿ” ಎಂಬ ಹಸರಿನ ನಿಯತಕಾಲಿಕೆಯನ್ನು ಪ್ರಕಟಿಸುವುದು; ಅದಕ್ಕಾಗಿ ಒಂದು ಪ್ರತ್ಯೇಕ “ಪ್ರಕಾಶನ ಮತ್ತು ಪ್ರಸರಣ ವಿಭಾಗ”ವನ್ನು ರಚಿಸುವುದು. ಅದರ ಮೂಲಕ, ನಿಯತಕಾಲಿಕೆಗಳು, ಪುಸ್ತಕಗಳು, ಶಬ್ದಮುದ್ರಿಕೆ ಮತ್ತು ದೃಶ್ಯಮುದ್ರಿಕೆಗಳನ್ನು ತಯಾರಿಸುವುದು ಹಾಗೂ ವಿದ್ಯುನ್ಮಾನ ಮಾಧ್ಯಮಗಳನ್ನು ಬಳಸಿ ಸಂಘದ ನೀತಿ ನಿಯಮಗಳಿಗೆ ಸರಿಹೊಂದುವ ಕಾರ್ಯಕ್ರಮಗಳ ಬಗ್ಗೆ ತ್ವರಿತ ಮತ್ತು ವ್ಯಾಪಕ ಪ್ರಚಾರ ನೀಡುವುದು.
 11. ಜಯಂತಿ ಮತ್ತು ಲಿಂಗೈಕ್ಯ ದಿನಾಚರಣೆ:  ಬಸವಣ್ಣ, ಚನ್ನಬಸವಣ್ಣ, ಅಲ್ಲಮಪ್ರಭು, ಸಿದ್ದರಾಮೇಶ್ವರ, ಮಡಿವಾಳ ಮಾಚಿದೇವರು, ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗಪೆದ್ದಿ, ಹಡಪದ ಅಪ್ಪಣ್ಣ, ಅಂಬಿಗರ ಚೌಡಯ್ಯ, ನುಲಿಯ ಚಂದಯ್ಯ, ಸಂಘೋಳ ನಾಗಿದೇವ, ಮೇದಾರ ಕೇತಯ್ಯ, ಜೇಡರ ದಾಸಿಮಯ್ಯ, ಆಯಕ್ಕಿ ಮಾರಾಯ್ಯ, ಕುರುಬ ಗೋಲಾಳ, ಅಕ್ಕಮಹಾದೇವಿ, ಸತ್ಯಕ್ಕ, ಅಕ್ಕನಾಗಮ್ಮ, ನೀಲಮ್ಮ ಮತ್ತು ಗಂಗಾಂಬಿಕೆ ದೇವಿಯವರ ಹಾಗೂ ಬಹುತೇಕ ಎಲ್ಲ ಪ್ರಮುಖ ಶರಣರ ಜಯಂತಿ ಇತ್ಯಾದಿಗಳನ್ನು ವ್ಯಾಪಕವಾಗಿ ಆಚರಿಸುವುದು.
 12. ಧಾರ್ಮಿಕ ಸುಧಾರಣೆ: ಕಳೆದ ಐನೂರು ವರ್ಷಗಳಲ್ಲಿ ಇತರ ಧರ್ಮಗಳ ಸಾಮಾಜೋ-ಧಾರ್ಮಿಕ ಮತ್ತು ಆರ್ಥಿಕ ಪರಿಸರ ಮತ್ತು ಪ್ರಭಾವದಿಂದ ಉಂಟಾಗಿರುವ (1) ಬಸವ ಮತ್ತು ಶರಣ ತತ್ವಗಳಿಗೆ ವಿರುದ್ಧವಾದ ಆಚರಣೆಗಳನ್ನು, ಸಂಸ್ಕಾರಗಳನ್ನು ಜನರಿಗೆ ತಿಳಿಸಿ ಹೇಳುವ ಮತ್ತು ತರಬೇತಿ ನೀಡುವ ಮೂಲಕ ನಿಧಾನವಾಗಿ ಅಂತಹ ಆಚರಣೆಗಳನ್ನು ಮತ್ತು ಸಂಸ್ಕಾರಗಳನ್ನು ನಿಲ್ಲಿಸಲು ಎಲ್ಲ ಸಬ್ಯ ಕ್ರಮಗಳನ್ನು ಕೈಗೆತ್ತಿಕೊಳ್ಳುವುದು. ವಿಶೇಷವಾಗಿ ಜನನ, ಲಿಂಗದೀಕ್ಷೆ, ಮದುವೆ ಮತ್ತು ಮರಣ ಸಂಬಂಧಿತ ನಾಲ್ಕು ಸಂಸ್ಕಾರಗಳನ್ನು ಲಿಂಗಾಯತ ಧರ್ಮದ ಪ್ರಕಾರ ತಿದ್ದಿ ಸರಳಗೊಳಿಸುವುದು; (2) ಸೂತ್ರ-ಗೋತ್ರ-ಸೂತಕಗಳನ್ನು ಆಚರಿಸದಂತೆ ಪರಿವರ್ತನೆ ತರುವುದು; (3) ಮೂಢನಂಬಿಕೆ, ಸ್ವರ್ಗ-ನರಕ, ಜನ್ಮ-ಪುರ್ನಜನ್ಮ, ಕರ್ಮಸಿದ್ದಾಂತಗಳಲ್ಲಿರುವ ನಂಬಿಕೆಗಳನ್ನು ಕಾಲಕ್ರಮೇಣ ಹೋಗಲಾಡಿಸುವುದು; (4) ಮೂರ್ತಿಪೂಜೆ, ಸಾವರಲಿಂಗ ಪೂಜೆ, ಡಂಬಾಚಾರ, ವೈಭವೋಪೇತ ಮದುವೆಗಳನ್ನು ನಿಯಂತ್ರಿಸುವುದು; (5) ಜ್ಯೋತಿಷ್ಯ ಕೇಳುವುದು, ಮುಹೂರ್ತ ಕೇಳುವುದು, ವಾಸ್ತುಶಾಸ್ತ್ರದಲ್ಲಿ ನಂಬಿಕೆ ಇಡುವುದು, ಯಜ್ಞ-ಯಾಗಗಳನ್ನು ಮಾಡುವುದು, ಕುಂಡಲಿ, ಜನ್ಮಜಾತಕ, ದೆವ್ವ ಬಿಡಿಸುವುದು, ಶುದ್ಧೀಕರಣ, ಮಡಿ-ಮೈಲಿಗೆಗಳನ್ನು ಆಚರಿಸುವುದನ್ನು ಶಿಕ್ಷಣದ ಮೂಲಕ ನಿಲ್ಲಿಸುವುದು. ಅದಕ್ಕಾಗಿ ಸೂಕ್ತವಾದ “ಶಿಕ್ಷಣ ಮತ್ತು ತರಬೇತಿ ವಿಭಾಗ”ವನ್ನು ರಚಿಸುವುದು.
 13. ಕಾಯಕ, ದಾಸೋಹ, ಸ್ತ್ರೀ ಸಮಾನತೆ ಜಾತ್ಯಾತೀತತೆ (ಜಾತಿ ಪಂಥಗಳ ನಿರಾಕರಣೆ), ಪರಿಸರ ರಕ್ಷಣೆ, ಪ್ರಾಣಿದಯೆ, ಶಾಖಾಹಾರಗಳನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದು.
 14. ವಧು-ವರರ ಅನ್ವೇಷಣೆ ಕೇಂದ್ರಗಳನ್ನು ತೆರೆಯುವುದು ಮತ್ತು ವಧು-ವರರ ಸಮಾವೇಶಗಳನ್ನು ಮೇಲಿಂದ ಮೇಲೆ ಕನಿಷ್ಠ ಪಕ್ಷ ಪ್ರತಿ ಆರು ತಿಂಗಳಿಗೊಮ್ಮೆ ನಡೆಸುವುದು. ಅವುಗಳ ಮೂಲಕ ಲಿಂಗಾಯತ ಒಳಪಂಗಡಗಳ ನಡುವೆ ವಿವಾಹ ಸಂಬಂಧ ಬೆಳೆಸಲು ಪ್ರಯತ್ನಿಸುವುದು. ಎಲ್ಲೆಲ್ಲಿ ಲಿಂಗಾಯತ ವಧು ಅಥವಾ ವರ ಲಿಂಗಾಯತೇತರನ್ನು ಮದುವೆಯಾಗ ಬಯಸಿದರೆ ಅವರಿಗೆ ಲಿಂಗಾಯತ ಧರ್ಮದ ದೀಕ್ಷೆ ನೀಡಿ, ವಿವಾಹಗಳನ್ನು ಏರ್ಪಡಿಸಲು ಸಹಾಯ ಮಾಡುವುದು.
 15. ಕನ್ನಡ/ಸ್ಥಳೀಯ ಭಾಷೆಗಳ ಬಳಕೆ: ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕನ್ನಡ/ಸ್ಥಳೀಯ ಭಾಷೆಯ ಬಳಕೆಯನ್ನು ಮತ್ತು ಸೂಕ್ತ ವಚನಗಳ ಬಳಕೆಯನ್ನು ಜಾರಿಗೆ ತರುವುದು ಮತ್ತು ಮದುವೆಯಂತಹ ಸಂಸ್ಕಾರಗಳಲ್ಲಿಯೂ ಸಂಸ್ಕøತ ಬಳಕೆಯನ್ನು ಕ್ರಮೇಣ ನಿಲ್ಲಿಸಿ ಕನ್ನಡೀಕರಿಸುವುದು/ಸ್ಥಳೀಯ ಭಾಷೆಗೆ ತರ್ಜುಮೆ ಮಾಡುವುದು.
 16. ಸಮಾಜ ಸೇವೆ: ರಾಜ್ಯ, ಅಂತರರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಲಿಂಗಾಯತ ಪ್ರವಾಸಿಗಳಿಗೆ ಅತಿಥಿ ಗೃಹ ಮತ್ತು ಭೋಜನಶಾಲೆ, ವೃದ್ಧಾಶ್ರಮಗಳು, ಅನಿವಾಸಿ ಭಾರತೀಯರ ಮಾತಾ-ಪಿತೃಗಳ ವಿಭಾಗ, ಸ್ಮಶಾನ ಸೌಲಭ್ಯ, ಅನಾಥಾಲಯ, ಪ್ರಶಿಕ್ಷಣ ಕೇಂದ್ರ, ಇತ್ಯಾದಿಗಳನ್ನು ಸ್ಥಾಪಿಸಲು ಸಹಾಯ ಮಾಡುವುದು.
 17. ಲಿಂಗಾಯತ ಬಡ ಮಕ್ಕಳಿಗೆ ಉಚಿತ ಪ್ರಸಾದ ನಿಲಯ, ಶಿಕ್ಷಣ ಪ್ರಸಾರ, ವಿದ್ಯಾರ್ಥಿ ವೇತನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಸನ್ಮಾನ, ಶ್ರೇಷ್ಠ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಗಳನ್ನು ಮಾಡಿದ ಮಹನೀಯರಿಗೆ ಸನ್ಮಾನ ಮಾಡುವುದು ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸುವುದು.
 18. ಸಂಪನ್ಮೂಲ ಸಂಗ್ರಹಣೆ: ಸಂಸ್ಥೆಗೆ ಅಗತ್ಯವಾದ ಭೂಮಿ, ಕಟ್ಟಡ, ವಾಹನ, ಸಿಬ್ಬಂದಿಯನ್ನು ಪೂರೈಸಿಕೊಳ್ಳುವುದು, ಗ್ರಂಥಾಲಯ, ಧ್ವನಿವರ್ಧಕ, ಆಸನಗಳು, ಸಭಾ ಭವನ, ಇತ್ಯಾದಿಗಳನ್ನು ಪಡೆದುಕೊಳ್ಳುವುದು.
 19. ಹಣದ ರೂಪದಲ್ಲಿ ದೇಣಿಗೆ, ಕಾಣಿಕೆ, ಸಹಾಯಧನ, ದಾನ, ದತ್ತಿ ಅಥವಾ ಸ್ಥಿರ ಮತ್ತು ಚರಾಸ್ತಿಗಳನ್ನು ಸ್ವೀಕರಿಸುವುದು ಮತ್ತು ದತ್ತಿ ದಾನಿಗಳ ಅಪೇಕ್ಷೆಯಂತೆ ದತ್ತಿ ಕಾರ್ಯಕ್ರಮಗಳನ್ನು ಆಚರಿಸುವುದು, ಅವುಗಳನ್ನು ಸಮುದಾಯದ ಒಳಿತಿಗೆ ಉಪಯೋಗಿಸುವುದು. ಅವುಗಳಿಗೆ ಸಂಬಂಧಿತ ಕಾಗದಪತ್ರಗಳನ್ನು ಮತ್ತು ಲೆಕ್ಕಗಳನ್ನು ಇಡುವುದು, ವಿಶೇಷ ದತ್ತಿಗಳನ್ನು ಸ್ಥಾಪಿಸುವುದು. ದಾನ, ದತ್ತಿಗಳನ್ನು ನೀಡುವ ದಾನಿಗಳು ತೆರಿಗೆ ವಿನಾಯಿತಿ ಸೌಲಭ್ಯ ಪಡೆಯಲು ಆದಾಯ ತೆರಿಗೆ ಇಲಾಖೆಯೊಂದಿಗೆ ಸೂಕ್ತ ಆದೇಶ ಪಡೆದುಕೊಳ್ಳುವುದು.
 20. ಮಹಾಸಭಾದ ಕಾರ್ಯಕ್ರಮಗಳನ್ನು ನಿರ್ವಹಿಸಲು ಮತ್ತು ಅದರ ಉದ್ದೇಶಿತ ಧ್ಯೇಯೋದ್ದೇಶಗಳನ್ನು ಈಡೇರಿಸಲು ಅನಿವಾರ್ಯ ಹಾಗೂ ವಿಶಿಷ್ಟ ಪ್ರಸಂಗಗಳಲ್ಲಿ ಕಾರ್ಯಕಾರಿ ಸಮಿತಿ ಸಭೆಯ ಮಂಜೂರಾತಿ ಪಡೆದು ಸಾಲ ತೆಗೆಯುವುದು, ಅವುಗಳಿಗೆ ಸ್ಥಿರಾಸ್ತಿಯ ಭದ್ರತೆ, ಹೈಪೊಥಿಕೇಶನ್, ಭೋಗ್ಯ ಒದಗಿಸುವುದು. ಆದರೆ, ಯಾವುದೇ ಸಾಲವು ನಿಗದಿತ ಸಮಯದೊಳಗೆ ಮಹಾಸಭಾದ ಸಾಲ ಮರುಪಾವತಿಸುವ ಆರ್ಥಿಕ ಶಕ್ತಿಗೆ ಮೀರಬಾರದು.
 21. ಮಹಾಸಭೆಯ ಯಾವುದೇ ಆಸ್ತಿಯನ್ನು ಅತ್ಯಂತ ಅನಿವಾರ್ಯ ಪ್ರಸಂಗಗಳಲ್ಲಿ ಮಾತ್ರ ಕಾರ್ಯಕಾರಿ ಸಮಿತಿಯ ಸಭೆಯ ಮಂಜೂರು ಪಡೆದು ಮುಂಬರುವ ದಿನಗಳಲ್ಲಿ ಮಹಾಸಭೆಗೆ ತೊಂದರೆಯಾಗದಂತೆ ಗುತ್ತಿಗೆಗೆ ನೀಡಬಹುದು.
 22. ವಿವಾದ ಪರಿಹಾರ: ಯಾವುದೇ ತಂಟೆ, ವ್ಯಾಜ್ಯ, ನ್ಯಾಯಾಲಯಗಳ ಪ್ರಕರಣಗಳಲ್ಲಿ ಸೂಕ್ತ ನ್ಯಾಯವಾದಿಗಳನ್ನು ನೇಮಕ ಮಾಡಿ ಸಂಘದ ಹಿತಾಸಕ್ತಿಗಳನ್ನು ಕಾಪಾಡುವುದು.
 23. ಅಂಗ ಸಂಸ್ಥೆಗಳ ನಿರ್ವಹಣೆ: ಸಮುದಾಯಕ್ಕೆ ಅಗತ್ಯವೆನಿಸುವ ಅಂಗಸಂಸ್ಥೆಗಳನ್ನು ತರಬೇತಿ, ಶಿಕ್ಷಣ, ಸಾಹಿತ್ಯ, ಸಂಗೀತ, ನೃತ್ಯ, ನಾಟಕಗಳಿಗೆ ಸಂಬಂಧಿಸಿದ ಇತರೇ ಸಂಸ್ಥೆಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸುವುದು.
 24. ಸಂಲಗ್ನತೆ ಪಡೆದುಕೊಂಡ (ಅಫಿಲಿಯೇಟೆಡ್) ಸಂಸ್ಥೆಗಳು: ಮಹಾಸಭೆಯ ಉದ್ದೇಶಗಳಿಗೆ ಸರಿಹೊಂದುವ ಕಾರ್ಯಗಳಿಗಾಗಿ ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯ, ಅಂತರ ರಾಜ್ಯ ಮಟ್ಟದಲ್ಲಿ ಅಸ್ತಿತ್ವದಲ್ಲಿರುವ ಬೇರೆ ಸಂಘ ಮತ್ತು ಸಂಸ್ಥೆಗಳನ್ನು “ಅಫಿಲಿಯೇಟೆಡ್ ಸಂಸ್ಥೆ” ಎಂದು ಪರಿಗಣಿಸಿ ಅವುಗಳಿಗೆ ಮಾನ್ಯತೆ ನೀಡಿ, ಅವುಗಳ ಓರ್ವ ಪ್ರತಿನಿಧಿಯನ್ನು ಈ ಸಂಘದ ಆಯಾ ಮಟ್ಟದ ಘಟಕಗಳಲ್ಲಿ ಸದಸ್ಯನೆಂದು ತೆಗೆದುಕೊಳ್ಳುವುದು. ಅಂತಹ ಸಂಸ್ಥೆಗಳೊಡನೆ ಸೌಹಾರ್ದಯುತ ಸಂಬಂಧಗಳನ್ನು ಬೆಳೆಸಿಕೊಂಡು ಮಹಾಸಭೆಯ ಕಾರ್ಯಕ್ರಮಗಳಲ್ಲಿ ಅವು ಸಕ್ರಿಯವಾಗಿ ಭಾಗವಹಿಸುವಂತೆ ಪ್ರೋತ್ಸಾಹಿಸುವುದು.
 25. ಲಿಂಗಾಯತ ಸಮುದಾಯದ ಒಳಿತಿಗೆ, ವಿಕಾಸಕ್ಕೆ, ಐಕ್ಯತೆಗೆ ಸೂಕ್ತವಾದ ಇನ್ಯಾವುದೇ ಕಾನೂನುಬದ್ಧವಾದ ಕಾರ್ಯಗಳನ್ನು ಕೈಗೊಳ್ಳುವುದು.
 26. ರಾಷ್ಟ್ರಮಟ್ಟದ ಮಹಾಸಭಾದ ಗುರಿ ಮತ್ತು ಉದ್ದೇಶಗಳು:

  1. ರಾಷ್ಟ್ರಮಟ್ಟದಲ್ಲಿ ಲಿಂಗಾಯತ ಧರ್ಮಕ್ಕೆ, ಸ್ವತಂತ್ರ ಧರ್ಮದ ಮತ್ತು ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ವಿವಿಧ ಸವಲತ್ತುಗಳನ್ನು ಪಡೆಯುವ ಎಲ್ಲ ಹೋರಾಟಗಳ ನೇತೃತ್ವವನ್ನು ರಾಷ್ಟ್ರಮಟ್ಟದ ಮಹಾಸಭಾ ವಹಿಸುತ್ತದೆ.
  2. ಬೇರೆ ಬೇರೆ ರಾಜ್ಯಗಳಲ್ಲಿ ಲಿಂಗಾಯತರ ಧಾರ್ಮಿಕ ಆಚಾರ, ವಿಚಾರ, ಸಂಪ್ರದಾಯಗಳಲ್ಲಿ ಅನೇಕ ಭಿನ್ನತೆಗಳಿವೆ. ಭಿನ್ನತೆಗಳನ್ನು ನಿವಾರಿಸಿ ಒಂದೇ ರೀತಿಯಲ್ಲಿ ಅವುಗಳನ್ನು ಪರಿವರ್ತಿಸುವ ಪ್ರಯತ್ನ ಮಾಡುವುದು.
  3. ಕನ್ನಡದಲ್ಲಿರುವ ಮೂಲ ಧಾರ್ಮಿಕ ಗ್ರಂಥಗಳನ್ನು ಆಯಾ ಸ್ಥಳೀಯ ಭಾಷೆಗಳಿಗೆ ಭಾಷಾಂತರ ಮಾಡಿಸುವುದು.
  4. ಅಂತರರಾಜ್ಯ ಸಮಾವೇಶಗಳನ್ನು, ವಿಚಾರ ಸಂಕಿರಣಗಳನ್ನು, ತರಬೇತಿ ಶಿಬಿರಗಳನ್ನು ಏರ್ಪಡಿಸಿ ಸಮಸ್ತ ಲಿಂಗಾಯತ ಸಮುದಾಯಗಳಲ್ಲಿ ಏಕತೆ ಮೂಡಿಸುವುದು. ವಿಚಾರ ವಿನಿಮಯ ಮತ್ತು ನಿರಂತರ ಬೆಳವಣಿಗೆಗಳನ್ನು ಇತರೆ ರಾಜ್ಯಗಳ ಲಿಂಗಾಯತರಿಗೆ ತಿಳಿಸಲು ಒಂದು ಮಾಸಿಕ ಪತ್ರಿಕೆಯನ್ನು ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಮತ್ತು ಇಂಗ್ಲೀಷ್‍ನಲ್ಲಿ ಪ್ರಕಟಿಸುವುದು.
  5. ಲಿಂಗಾಯತ ಸಮುದಾಯಕ್ಕೆ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಮಹಾಸಭಾ ಘಟಕಗಳಿಂದ ಸನ್ಮಾನ ಏರ್ಪಡಿಸುವುದು.
  6. ಅಂತರ ರಾಜ್ಯ ಮಟ್ಟದ ವಧು-ವರರ ಮಾಹಿತಿ ಕೇಂದ್ರಗಳನ್ನು ತೆರೆದು ವರ್ಷದಲ್ಲಿ ಕನಿಷ್ಠ ಎರಡು ಬಾರಿ ವಧು-ವರರ ಸಮಾವೇಶ ನಡೆಸುವುದು. ಆ ಮೂಲಕ ಲಿಂಗಾಯತ ಸಮಾಜದಲ್ಲಿ ಏಕತೆ ಮೂಡಿಸುವುದು.
  7. ಲಿಂಗಾಯತರಿಗೆ ಅನ್ಯಾಯವಾಗುವಂತಹ ಅಥವಾ ಅವಹೇಳನ/ಅಪಮಾನ ಮಾಡುವಂತಹ, ಅಲಕ್ಷ್ಯ ಮಾಡುವಂತಹ ಅಥವಾ ತಾರತಮ್ಯದ ನಡವಳಿಕೆಯೆಂದು ಕಂಡು ಬರುವ ಪ್ರಸಂಗಗಳಲ್ಲಿ ಅವುಗಳ ವಿರುದ್ಧ ಎಲ್ಲ ರಾಜ್ಯಗಳ ಲಿಂಗಾಯತರ ಹೋರಾಟಗಳನ್ನು ಸಂಘಟಿಸುವುದು.
  8. ಲಿಂಗಾಯತ ಸಮುದಾಯದ ಏಳಿಗೆ, ಏಕತೆ, ರಕ್ಷಣೆಗೆ ಸಂಬಂಧಿಸಿದ ರಾಷ್ಟ್ರ ಮತ್ತು ರಾಜ್ಯ ಮಟ್ಟಗಳಲ್ಲಿ ಯಾವುದೇ ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.